ಎಸ್ನಿನ್, ಎಸ್.ಎ: 1895-1925. ಸೋವಿಯತ್ ದೇಶದ ಕವಿ. ಸರ್ಗಿ ಅಲೆಕ್ಸಾಂಡ್ರೋವಿಚ್ ಎಸ್ನಿನ್ ಇವನ ಪುರ್ಣ ಹೆಸರು. ಒಮ್ಮೆ ಗಾರ್ಕಿ ಇವನನ್ನು ಪುಷ್ಕಿನನ ಅನಂತರ ಬಂದ ಅತ್ಯಂತ ಶ್ರೇಷ್ಠ ಕವಿ ಎಂದು ಪ್ರಶಂಸಿಸಿದ್ದಾನೆ. ವಿದ್ಯೆ ಸಂಸ್ಕಾರಗಳಿಲ್ಲದ ಬಡರೈತ  ಕುಟುಂಬದಲ್ಲಿ ಹುಟ್ಟಿದ್ದರೂ ಈತ ರಷ್ಯನ್ ಜಾನಪದ ಸಾಹಿತ್ಯವನ್ನು ಚೆನ್ನಾಗಿ ಅರಿತಿದ್ದ. 1916ರಲ್ಲಿ ಬರೆದ ಮೊಟ್ಟ ಮೊದಲ ಕವನ ಸಂಗ್ರಹ ಇವನ ಚಿಂತನೆ ಹಾಗೂ ದೇಶಪ್ರೇಮದ ಪ್ರತೀಕವಾಗಿದೆ. ರಷ್ಯನ್ ಕ್ರಾಂತಿಯನ್ನು ಕಳಕಳಿಯಿಂದ ಸ್ವಾಗತಿಸಿದ ಈತ 1919ರಲ್ಲಿ  ಎಜ್ರಾ ಪೌಂಡನ ಪ್ರತಿಮಾವಾದದಿಂದ (ಇಮೇಜಿಸಂ) ಪ್ರಭಾವಿತನಾಗಿ ಪ್ರತಿಮಾವಾದಿಗಳ ಪಂಥವೊಂದನ್ನು ಸ್ಥಾಪಿಸಿದ. ರಷ್ಯನ್ ಕ್ರಾಂತಿ ವಿಫಲವಾದಾಗ ನಿರಾಶೆ ಹೊಂದಿ ಮಾಸ್ಕೋಗೆ ತೆರಳಿ ಅಲ್ಲಿ ಸ್ವೇಚ್ಛಾಚಾರಿ ಜೀವನ ನಡೆಸಿದ. ಮಾಸ್ಕೋ ನಗರದ ಕುಡಿತದ  ಅಂಗಡಿಗಳನ್ನು ಚಿತ್ರಿಸುವ ಕವನಗಳಲ್ಲಿ, ಪುಂಡನ ತಪ್ಪೊಪ್ಪಿಗೆ ಎಂಬ ಕವನದಲ್ಲಿ ದುರಂತವ್ಯಗ್ರತೆ ಇದೆ. ಹೊಸ ಸೋವಿಯತ್ ದೇಶ ನಿರ್ಮಿಸಿದ ಆದರ್ಶ ಗ್ರಾಮವಾಗಲಿ ಸದ್ದು ಗದ್ದಲ ತುಂಬಿದ ಮಹಾನಗರವಾಗಲಿ ಇವನಿಗೆ ಶಾಂತಿ, ಸಮಾಧಾನಗಳನ್ನು ನೀಡಲಿಲ್ಲ. 

ಐಸಾಡೊರ ಡಂಕನಳೊಂದಿಗೆ ಮಾಡಿಕೊಂಡ ಬೇಜವಾಬ್ದಾರಿಯುತವಾದ ವಿವಾಹ ಇವನ ಬಾಳನ್ನು ಮತ್ತಷ್ಟು ಹದಗೆಡಿಸಿತು. ಪೌರಸ್ತ್ಯ ದೇಶಗಳಲ್ಲಿ ಪ್ರವಾಸ ಕೈಕೊಂಡಾಗ ಬರೆದ ಪರ್ಷಿಯನ್ ರೂಢಿಗಳನ್ನುಳ್ಳ ಸರಳ ರಮ್ಯ ಕವನಗಳೂ ಇವನಿಗೆ ತೃಪ್ತಿ ನೀಡಲಿಲ್ಲ.  ನಿರಾಶೆಯಿಂದ ಈತ ಆತ್ಮಹತ್ಯೆ ಮಾಡಿಕೊಂಡ.	(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ